ಹೊಸದಿಗಂತ ವರದಿ ವಿಜಯನಗರ:
ಸಾರಾಯಿಗೆ ಬಳಕೆಯಾಗುವ ಬೆಲ್ಲದಿಂದ ಅಂಗನವಾಡಿಯಲ್ಲಿ ಮಕ್ಕಳಿಗೆ ಸಿಹಿ ಊಟ ಬಡಿಸಲಾಗುತ್ತಿದೆ. ಇದು ಮುಗ್ದ ಮಕ್ಕಳ ಆರೋಗ್ಯ ಹೆಚ್ಚಿಸುವುದೋ, ಅವರನ್ನು ಸಾಯಿಸುವುದೋ ಎಂದು ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿ.ಪಂ. ಸಹಯೋಗದಲ್ಲಿ ಸಂಸದ ಈ.ತುಕಾರಾಂ ಅಧ್ಯಕ್ಷತೆಯಲ್ಲಿ ಹಗರಿಬೊಮ್ಮನಹಳ್ಳಿಯಲ್ಲಿ ಸೋಮವಾರ ಆಯೋಜಿಸಿರುವ ದಿಶಾ ಸಮಿ ತಿಸಭೆಯಲ್ಲಿ ಮಾತನಾಡಿದ ಅವರು, ಹರಪನಹಳ್ಳಿ ತಾಲೂಕಿನ ಅಂಗನಾಡಿಗಳಿಗೆ ಭೇಟಿ ನೀಡಿದಾಗ ಅತ್ಯಂತ ಕಳಪೆ ಗುಣಮಟ್ಟದ ಬೆಲ್ಲ ಪೂರೈಕೆಯಾಗಿದೆ. ಸಂಪೂರ್ಣ ಹುಳಿಯಾಗಿದ್ದು, ಕಪ್ಪು ಬಣ್ಣದ ಬೆಲ್ಲ ಪೂರೈಕೆಯಾಗಿದೆ ಕಂದು ಬಂದಿದೆ ಎಂದುಸಭೆಗೆ ದೂರಿದರು.
ಅದಕ್ಕೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಶ್ವೇತಾ, ಗುತ್ತಿಗೆದಾರರಿಂದ ಸರಬರಾಜು ಆಗುವ ಬಲ್ಲ ಪ್ರಮಾಣಿತವಾಗಿದೆ ಎಂದರು.
ಅದಕ್ಕೆ ಆಕ್ಷೇಪಿಸಿದ ಶಾಸಕಿ ಲತಾ, ಲ್ಯಾಬ್ ಟೆಸ್ಟ್ ಗಳು ಯಾವ ರೀತಿ ರಿಪೋರ್ಟ್ ಬರುತ್ತದೆ ಎಂಬುದು ನನಗೆ ಗೊತ್ತಿದೆ. ಬೇಕಾದರೆ, ನಾನು ಲ್ಯಾಬ್ ಕಳಿಸ್ತೀನಿ ರಿಪೋರ್ಟ್ ನೋಡಿ ಎಂದು ಸವಾಲು ಹಾಕಿದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಸಂಸದ ಈ.ತುಕಾರಾಂ, ಜಿಲ್ಲಾಧಿಕಾರಿ ದಿವಾಕರ್, ಶಾಸಕರ ದೂರು ಗಂಬೀರವಾಗಿ ಪರಿಗಣಸಿ, ಸಿಡಿಪಿಓ ಹಾಗೂ ತಾವೂ ಪ್ರತ್ಯೇಕವಾಗಿ ಅಂಗನಾಡಿಗಳಿಗೆ ಭೇಟಿ ನೀಡಿ, ಒಂದು ವಾರದಲ್ಲಿ ವರದಿ ಸಲ್ಲಿಸಿ. ಸಂಬಂಧಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿ ಸೇರಿಸಲಾಗುವುದು ಎಂದು ತಿಳಿಸಿದರು.

