ATMಗೆ ಹಣ ಸಾಗಿಸುವ ವಾಹನದ ಮೇಲೆ ಫೈರಿಂಗ್: 93 ಲಕ್ಷ ದರೋಡೆ, ಓರ್ವ ಮೃತ್ಯು, ಮತ್ತೋರ್ವ ಗಂಭೀರ

ಹೊಸದಿಗಂತ ಬೀದರ್:

ನಗರದ ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ನ್ಯಾಯಾಲಯ ಮಧ್ಯೆ ಹೊಂದಿಕೊಂಡಿರುವ ಎಸ್ ಬಿಐ ಬ್ಯಾಂಕ್ ಎದುರು ಗುರುವಾರ ಹಾಡಹಗಲಲ್ಲಿಯೇ ಸಿನಿಮೀಯ ಶೈಲಿಯಲ್ಲಿ ಶೂಟೌಟ್, ದರೋಡೆ ನಡೆದಿದೆ. ಬ್ಯಾಂಕ್ ನಿಂದ ಎಟಿಎಂಗಳಿಗೆ ಹಣ ಸಾಗಿಸುವ ಸಂಸ್ಥೆಯ ವ್ಯಾನ್ ನಲ್ಲಿ ನಿಯೋಜಿತ ಒಬ್ಬರು ಸಿಬ್ಬಂದಿ ಗುಂಡಿನ ದಾಳಿಗೆ ಬಲಿಯಾಗಿದ್ದು,‌ ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.ಸುಮಾರು 93 ಲಕ್ಷ ರೂ. ನಗದು ಹಣದ ಡಬ್ಬಾ ದೋಚಲಾಗಿದೆ. ಈ ಘಟನೆ ಗಡಿ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

ಸಿಎಂಎಸ್ ಸಂಸ್ಥೆಗೆ ಸೇರಿರುವ ವ್ಯಾನ್ ಗೆ ಎಸ್ ಬಿಐನಿಂದ ಹಣದ ಡಬ್ಬಾ ತುಂಬಲಾಗಿತ್ತು. ಎಟಿಎಂಗಳಿಗೆ ಹಣ ಹಾಕಲು ಇವು ಒಯ್ಯಲಾಗಿತ್ತು. ಈ ವೇಳೆ ಬೈಕ್ ಮೇಲೆ ಬಂದ ಇಬ್ಬರು ಆಗಂತುಕರು ವ್ಯಾನ್ ಸಿಬ್ಬಂದಿ ಮೇಲೆ ಏಳು ಸುತ್ತು ಫೈರ್ ಮಾಡಿದ್ದಾರೆ. ಇದರಲ್ಲಿ ವ್ಯಾನ್‌ ಸಿಬ್ಬಂದಿಗಳಾದ ವೆಂಕಟೇಶ ಗಿರಿ ಚಿದ್ರಿ (42) ಸ್ಥಳದಲ್ಲೇ ಹತರಾದರೆ ಶಿವಕುಮಾರ ಗುನ್ನಳ್ಳಿ( 27) ಗಂಭೀರವಾಗಿ ಗಾಯಗೊಂಡಿದ್ದಾರೆ. ಚಾಲಕ ರಾಜಶೇಖರ ಬ್ಯಾಂಕ್ ಒಳಗಿದ್ದ ಕಾರಣ ಅದೃಷ್ಟವಶಾತ್ ದಾಳಿಕೋರರಿಂದ ಬಚಾವ್ ಆದಂತಾಗಿದೆ.

ಹಣದ ಡಬ್ಬಾ ತರುತ್ತಿದ್ದಂತೆಯೇ ಆಗಂತಕರು ಬೈಕ್ ಮೇಲೆ ಬಂದು ದಾಳಿ ನಡೆಸಿದ್ದಾರೆ. ಗಿರಿ ವೆಂಕಟೇಶ ದೇಹಕ್ಕೆ ನಾಲ್ಕು ಗುಂಡು ಹೊಕ್ಕಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವಕುಮಾರ ಅವರ ಹೃದಯಕ್ಕೆ ಒಂದು ಗುಂಡು ಹೊಕ್ಕಿದೆ. ಬ್ರಿಮ್ಸ್ ಆಸ್ಪತ್ರೆಯಲ್ಲಿ ಗುಂಡು ತೆಗೆದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರ ಸ್ಥಿತಿ ಗಂಭೀರವಿದೆ ಎಂದು ಮೂಲಗಳು ತಿಳಿಸಿವೆ.

ಹೆಲ್ಮೆಟ್ ಧರಿಸಿ ಬಂದಿದ್ದ ಈ ಇಬ್ಬರು ಆಗಂತುಕರು ಮೊದಲು ವ್ಯಾನ್ ಸಿಬ್ಬಂದಿಗಳ ಮೇಲೆ ಖಾರದ ಪುಡಿ ಎರಚಿ, ನಂತರ ಫೈರಿಂಗ್ ಮಾಡಿದ್ದಾರೆ ಎನ್ನಲಾಗಿದೆ. ಫೈರಿಂಗ್ ಬಳಿಕ ಬೈಕ್ ಮೇಲೆಯೇ 93 ಲಕ್ಷ ರೂ. ಇದ್ದ ಹಣದ ಡಬ್ಬಾ ಹೊತ್ತು ಪರಾರಿಯಾಗಿದ್ದಾರೆ.

.ಘಟನೆ ಬಳಿಕ ಎಚ್ಚೆತ್ತ ಪೊಲೀಸರು ಎಲ್ಲ ಮಗ್ಗುಲಗಳಿಂದ ಕ್ಷಿಪ್ರ ತನಿಖೆ ಆರಂಭಿಸಿದ್ದಾರೆ. ವಿಶೇಷ ತಂಡಗಳು ರಚಿಸಲಾಗಿದೆ. ನಗರದಲ್ಲೆಡೆ ಸೇರಿ ವಿವಿಧೆಡೆ ಸಿಸಿಟಿವಿ ಪರಿಶೀಲನೆ ಮಾಡುವ ಜೊತೆಗೆ ಆಗಂತುಕರ ಶೋಧಕ್ಕೆ ಜಾಲ ಬೀಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!