ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವರ್ಷದ ಅಕ್ಟೋಬರ್ ನಿಂದ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿಗಳ ಜನ ಆರೋಗ್ಯ ಯೋಜನೆ 70 ವರ್ಷ ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಾಗಿರುವವರಿಗೆ ವಿಸ್ತರಣೆಯಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ. ಪಿ. ನಡ್ಡಾ ತಿಳಿಸಿದ್ದಾರೆ.
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿಗಳ ಜನ ಆರೋಗ್ಯ ಯೋಜನೆ(ಎಬಿ-ಪಿಎಂಜೆಎವೈ)ಯ 6ನೇ ವಾರ್ಷಿಕೋತ್ಸವ ಆಚರಿಸುತ್ತಿರುವಾಗ ಇದು ಅಪಾರ ಹೆಮ್ಮೆ ಮತ್ತು ಪ್ರತಿಬಿಂಬದ ಕ್ಷಣವಾಗಿದೆ. 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ ಅವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಲೆಕ್ಕಿಸದೆ ಎಬಿ-ಪಿಎಂಜೆಎವೈ ಯೋಜನೆಯ ಪ್ರಯೋಜನಗಳನ್ನು ವಿಸ್ತರಿಸುವ ಸರ್ಕಾರದ ಇತ್ತೀಚಿನ ನಿರ್ಧಾರವು ದೇಶದಲ್ಲಿ ಬದಲಾಗುತ್ತಿರುವ ಜನಸಂಖ್ಯಾ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳುವ ಸೂಕ್ಷ್ಮವಾದ ಮತ್ತು ದಿಟ್ಟ ಹೆಜ್ಜೆಯಾಗಿದೆ ಎಂದಿದ್ದಾರೆ.
ಪ್ರಧಾನ ಮಂತ್ರಿ ಮೋದಿ ಅವರ ದೂರ ದೃಷ್ಟಿಯ ನಾಯಕತ್ವದಲ್ಲಿ 2018 ಸೆಪ್ಟೆಂಬರ್ ನಲ್ಲಿ ಈ ಯೋಜನೆ ಪ್ರಾರಂಭಿಸಲಾಯಿತು. ಎಬಿ-ಪಿಎಂಜೆಎವೈ ವಿಶ್ವದ ಅತಿದೊಡ್ಡ ಆರೋಗ್ಯ ಉಪಕ್ರಮಗಳಲ್ಲಿ ಒಂದಾಗಿ ಬೆಳೆದಿದೆ. ಇದು ಎಲ್ಲಾ ನಾಗರಿಕರಿಗೆ, ವಿಶೇಷವಾಗಿ ಅತ್ಯಂತ ದುರ್ಬಲರಿಗೆ ಸಮಾನವಾದ ಆರೋಗ್ಯ ಸೇವೆ ಒದಗಿಸುವ ಸರ್ಕಾರದ ಬದ್ಧತೆಯನ್ನು ಪ್ರತಿನಿಧಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಆಯುಷ್ಮಾನ್ ಭಾರತ್ ಯೋಜನೆ ಯಾವುದೇ ಭಾರತೀಯರಿಗೆ ಅವರ ಆರ್ಥಿಕ ಸ್ಥಿತಿಯ ಕಾರಣದಿಂದ ಆರೋಗ್ಯ ಸೇವೆ ನಿರಾಕರಿಸಬಾರದು ಎಂಬುದನ್ನು ಖಚಿತಪಡಿಸುತ್ತಿದೆ. ದ್ವಿತೀಯ ಮತ್ತು ತೃತೀಯ ಆಸ್ಪತ್ರೆಯಲ್ಲಿ ಆರೈಕೆ ಪಡೆಯಲು ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ವಾರ್ಷಿಕ ರಕ್ಷಣೆ ಒದಗಿಸುವುದರೊಂದಿಗೆ, ಎಬಿ-ಪಿಎಂಜೆಎವೈ ಯೋಜನೆಯು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ದೇಶದ ಕೆಲವು ಅತ್ಯುತ್ತಮ ಆಸ್ಪತ್ರೆಗಳಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಉಚಿತವಾಗಿ ಪಡೆಯಲು ಮಾರ್ಗ ಒದಗಿಸಿದೆ.
ಈ ಯೋಜನೆಯಡಿ, 55 ಕೋಟಿಗೂ ಹೆಚ್ಚು ಜನರು ಆರೋಗ್ಯ ಸೇವೆಗಳಿಗೆ ಅರ್ಹರಾಗಿದ್ದಾರೆ, 7.5 ಕೋಟಿಗಿಂತ ಹೆಚ್ಚಿನ ಚಿಕಿತ್ಸೆಗಳನ್ನು 1 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದಲ್ಲಿ ಯಶಸ್ವಿಯಾಗಿ ಒದಗಿಸಲಾಗಿದೆ,ಇದೊಂದು ಗಮನಾರ್ಹ ಸಾಧನೆಯಾಗಿದೆ. ಯೋಜನೆಯ ವ್ಯಾಪ್ತಿ ಸಮಗ್ರವಾಗಿದ್ದು, 1900ಕ್ಕೂ ಹೆಚ್ಚು ವೈದ್ಯಕೀಯ ಕಾರ್ಯವಿಧಾನಗಳನ್ನು ಒಳಗೊಂಡಿದೆ, ಹೃದಯದ ಬೈಪಾಸ್ನಂತಹ ಸಂಕೀರ್ಣ ಶಸ್ತ್ರಚಿಕಿತ್ಸೆಗಳು ಮತ್ತು ಹೃದಯ ಜಂಟಿ ಬದಲಿಗಳಿಂದ ಹಿಡಿದು ಕ್ಯಾನ್ಸರ್ ಮತ್ತು ಮೂತ್ರಪಿಂಡದಂತಹ ಕಾಯಿಲೆಗಳಿಗೆ ಚಿಕಿತ್ಸೆಗಳು ಸಿಗುತ್ತಿವೆ. ಇವುಗಳು ಈ ಹಿಂದೆ ಹಲವರಿಗೆ ತಲುಪಲು ಸಾಧ್ಯವಾಗದ ಚಿಕಿತ್ಸೆಗಳಾಗಿದ್ದವು, ಆದರೆ ಎಬಿ-ಪಿಎಂಜೆಎವೈ ಯೋಜನೆಯು ಅವುಗಳನ್ನು ಸುಲಭವಾಗಿ, ಕೈಗೆಟುಕುವ ಬೆಲೆಗೆ ಮತ್ತು ಎಲ್ಲರಿಗೂ ಲಭ್ಯವಾಗುವಂತೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಎಬಿ-ಪಿಎಂಜೆಎವೈ ಯೋಜನೆಯ ವಿಶಿಷ್ಟ ಲಕ್ಷಣವೆಂದರೆ ಆರೋಗ್ಯ ಪೂರೈಕೆದಾರರ ಸದೃಢವಾದ ಜಾಲ ನಿರ್ಮಿಸುವ ಸಾಮರ್ಥ್ಯ ಹೊಂದಿದೆ. ಇಂದು 13,000 ಖಾಸಗಿ ಆಸ್ಪತ್ರೆಗಳು ಸೇರಿದಂತೆ ಭಾರತದಾದ್ಯಂತ 29,000ಕ್ಕೂ ಹೆಚ್ಚು ಆಸ್ಪತ್ರೆಗಳು ಯೋಜನೆಯಡಿ ನೋಂದಾಯಿಸಿಕೊಂಡಿವೆ. ಈ ಜಾಲವು ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಸಮಾನವಾಗಿ ವ್ಯಾಪಿಸಿದೆ. ದೇಶದ ಅತ್ಯಂತ ದೂರದ ಭಾಗಗಳಲ್ಲಿ ವಾಸಿಸುವವರೂ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಪ್ರವೇಶಿಸಬಹುದು ಎಂಬುದನ್ನು ಖಚಿತಪಡಿಸುತ್ತದೆ. ಯೋಜನೆಯ “ವಿಶಿಷ್ಟ ಪೋರ್ಟೆಬಿಲಿಟಿ” ವೈಶಿಷ್ಟ್ಯವು ಫಲಾನುಭವಿಗಳು ಅವರು ಸೇರಿರುವ ರಾಜ್ಯದ ಜತೆಗೆ ದೇಶಾದ್ಯಂತ ಇರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು ಎಂಬುದನ್ನು ಖಚಿತಪಡಿಸಿದೆ ಎಂದು ತಿಳಿಸಿದ್ದಾರೆ.
