ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇವರನಾಡು ಅಕ್ಷರಶಃ ಸ್ಮಶಾನದಂತಾಗಿದೆ, ಮಣ್ಣಿನಡಿ ಕೆದಕಿದಷ್ಟು ಮೃತದೇಹಗಳು ಪತ್ತೆಯಾಗುತ್ತಿವೆ, ಈವರೆಗೂ ಜಲಪ್ರಳಯಕ್ಕೆ 143 ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಏರಿಕೆ ಆಗುತ್ತಲೇ ಇದೆ.
ಸೇತುವೆಗಳು ನೀರಿನಲ್ಲಿ ಕೊಚ್ಚಿ ಹೋಗಿರುವ ಕಾರಣ ಮರದಿಂದ ಮರಕ್ಕೆ ಹಗ್ಗ ಕಟ್ಟಿ ರೋಪ್ ವೇ ನಿರ್ಮಿಸಿ ಆ ರೋಪ್ ವೇ ಮೂಲಕ ಒಂದು ಕಡೆಯಿಂದ ಮತ್ತೊಂದು ಕಡೆಗೆ ಶವ ಸಾಗಿಸಲಾಗುತ್ತಿದೆ.

ಮುಂಡಕ್ಕೈ, ಅಟ್ಟಮಲಾ ನಗರ ಮತ್ತು ಚೂರಲ್ ಮಲೈ ನಗರವನ್ನು ಸಂಪರ್ಕಿಸಲು ಇದ್ದ ಏಕೈಕ ದೊಡ್ಡ ಸೇತುವೆ ಕೊಚ್ಚಿ ಹೋಗಿದೆ. ಪರಿಣಾಮ ಈಗ ರಕ್ಷಣಾ ತಂಡಗಳು ರೋಪ್ವೇ ಬಳಸಿಕೊಂಡು ಸಂತ್ರಸ್ತರನ್ನು ತಲುಪಿ ರಕ್ಷಣೆ ಮಾಡುತ್ತಿದ್ದಾರೆ. ಇದು ಕಷ್ಟದ ಟಾಸ್ಕ್ ಆಗಿದೆ. ರಕ್ಷಣಾ ಸಿಬ್ಬಂದಿ ಕೂಡ ಜಾಗರೂಕವಾಗಿರಬೇಕಾದ ಅವಶ್ಯ ಇದೆ.

ಮಂಗಳವಾರ ಬೆಳಗ್ಗೆ ದುರಂತ ನಡೆದ ಬಳಿಕ ಮಂಡಕ್ಕೈಯಲ್ಲಿ ಸಿಲುಕಿದ್ದ ಜನರನ್ನು ತಲುಪಲು 13 ಗಂಟೆ ಬೇಕಾಗಿತ್ತು. ಮೆಪ್ಪಾಡಿ ಮತ್ತು ಚೂರಲ್ ಮಲೈ ಹೊರ ಜಗತ್ತಿನೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತ್ತು. ಹೆಲಿಕಾಪ್ಟರ್ ಬಳಸಿ ಕಾರ್ಯಾಚರಣೆಗೆ ಸೇನೆ ಸಿದ್ಧವಾಗಿದ್ದರೂ ನಿರಂತರ ಮಳೆ ಸುರಿಯುತ್ತಿದೆ. ಕೆಟ್ಟ ಹವಾಮಾನದಿಂದಾಗಿ ರಕ್ಷಣಾ ಕಾರ್ಯಾಚರಣೆ ದುಸ್ತರವಾಗಿದೆ.
