ಹೊಸದಿಗಂತ ವರದಿ, ಪುತ್ತೂರು:
ಯುವ ಉರಗಪ್ರೇಮಿ ಪುತ್ತೂರಿನ ತೇಜಸ್ ಬನ್ನೂರು 25ಕ್ಕೂ ಮಿಕ್ಕಿದ ಹೆಬ್ಬಾವಿನ ಮರಿಗಳನ್ನು ರಕ್ಷಿಸಿ ಜಿಲ್ಲೆಯ ಬೇರೆ ಬೇರೆ ಅರಣ್ಯಕ್ಕೆ ಬಿಡುವ ಮೂಲಕ ತನ್ನ ಉರಗಪ್ರೇಮವನ್ನು ಮೆರೆದಿದ್ಧಾರೆ.
ಕಳೆದ ಐದಾರು ವರ್ಷಗಳಿಂದ ಸಂಕಷ್ಟದಲ್ಲಿರುವ ಉರಗ ಸಂತಾನವನ್ನು ರಕ್ಷಿಸಿ, ಅವುಗಳನ್ನು ಮತ್ತೆ ಪ್ರಕೃತಿಗೆ ನೀಡುವ ಕಾರ್ಯವನ್ನು ನಡೆಸುತ್ತಿದ್ದಾರೆ. ಈವರೆಗೆ ಸುಮಾರು 100 ಕ್ಕೂ ಮಿಕ್ಕಿದ ಹೆಬ್ಬಾವಿನ ಮರಿಗಳನ್ನು ಕಾಡಿಗೆ ಬಿಟ್ಟು ಹೆಬ್ಬಾವುಗಳ ಸಂತತಿಯನ್ನು ರಕ್ಷಿಸಿದ್ದಾರೆ.
ಹೆಚ್ಚಾಗಿ ಮರದ ಪೊಟರೆಯೊಳಗೆ, ಬಿದ್ದ ತೆಂಗಿನ ಮರದ ಟೊಳ್ಳಾದ ಭಾಗದಲ್ಲಿ ಹೆಬ್ಬಾವುಗಳು ಮೊಟ್ಟಗಳನ್ನು ಇಡುತ್ತವೆ. ಸುಮಾರು 60 ದಿನಗಳ ಕಾಲ ಹೆಬ್ಬಾವುಗಳು ಮರಿಗಳಿಗೆ ಕಾವನ್ನು ನೀಡುತ್ತದೆ. ಹಾವುಗಳಲ್ಲಿ ಹೆಬ್ಬಾವು ಮತ್ತು ಕಾಳಿಂಗ ಸರ್ಪ ಮಾತ್ರ ತಮ್ಮ ಮೊಟ್ಟೆಗಳಿಗೆ ಕಾವು ನೀಡುವ ಮೂಲಕ ಮರಿಗಳನ್ನು ಹೊರ ತರುತ್ತದೆ. ಮಾನವ ಅಥವಾ ಇತರ ಪ್ರಾಣಿಗಳ ತೊಂದರೆಯಾದಾಗ ಮಾತ್ರ ಹೆಬ್ಬಾವು ಮತ್ತು ಕಾಳಿಂಗ ಸರ್ಪ ತಮ್ಮ ಮೊಟ್ಟೆಗಳನ್ನು ಬಿಟ್ಟು ಬೇರೆಡೆ ಸಾಗುತ್ತದೆ. ಹೀಗೆ ಸಾಗಿದ ಸಂದರ್ಭದಲ್ಲಿ ಮೊಟ್ಟೆಗಳು ಕಾವಿಲ್ಲದೆ ಹಾಳಾಗುವ ಸಾಧ್ಯತೆಗಳೂ ಹೆಚ್ಚಾಗಿರುತ್ತದೆ.
ಹೀಗೆ ಹಾವುಗಳಿಲ್ಲದೆ ಅನಾಥವಾಗಿರುವ ಇಂಥಹ ಮೊಟ್ಟೆಗಳನ್ನು ಶ್ರೇಯಸ್ ಅರಣ್ಯ ಇಲಾಖೆಯ ಅನುಮತಿಯೊಂದಿಗೆ ತಮ್ಮ ಮನೆಗೆ ಕೊಂಡೊಯ್ದು ಅವುಗಳಿಗೆ ಕೃತಕ ಕಾವನ್ನು ನೀಡುವ ವ್ಯವಸ್ಥೆ ಮಾಡುತ್ತಾರೆ. ಇದೇ ರೀತಿ ಈ ಬಾರಿ ಬಂಟ್ವಾಳ ತಾಲೂಕಿನ ಅನಂತಾಡಿಯಲ್ಲಿ ಸಂಗ್ರಹಿಸಿದ 12 ಮತ್ತು ಕನ್ಯಾನದಲ್ಲಿ ಸಂಗ್ರಹಿಸಿ 13 ಮೊಟ್ಟೆಗಳಿಗೆ ಕೃತಕ ಕಾವು ನೀಡಿ ಮರಿ ಮಾಡುವ ಮೂಲಕ ಜಿಲ್ಲೆಯ ವಿವಿಧ ಕಾಡುಗಳಿಗೆ ಬಿಟ್ಟಿದ್ದಾರೆ.