ಹೊಸದಿಗಂತ ವರದಿ, ಮೇಲುಕೋಟೆ
ಶ್ರೀಚೆಲುವನಾರಾಯಣಸ್ವಾಮಿಯವರ ಕಾರ್ತಿಕಮಾಸದ ತೊಟ್ಟಿಲಮಡು ಜಾತ್ರಾಮಹೋತ್ಸವವೆಂದೇ ಪ್ರಖ್ಯಾತವಾದ ‘‘ಅಷ್ಠತೀರ್ಥೋತ್ಸವ’’ ಬುಧವಾರ ವೈಭವದಿಂದ ನೆರವೇರಿತು.
ರಾಜಮುಡಿ ಬ್ರಹ್ಮೋತ್ಸವದ ಆರನೇ ತಿರುನಾಳ್ ಮತ್ತು ದಶಮಿತಿಥಿ ಕೂಡಿದ ವಿಶೇಷ ದಿನದಂದು ಶ್ರೀಚೆಲುವನಾರಾಯಣನ ಬಂಗಾರದ ಪಾದುಕೆಗೆ ಪಂಚಕಲ್ಯಾಣಿ, ವೈಕುಂಠಗಂಗೆ ಹಾಗೂ ಎಲ್ಲಾ ಎಂಟು ತೀರ್ಥಗಳಲ್ಲಿ ವೇದಘೋಷದೊಂದಿಗೆ ಅಭಿಷೇಕ ನೆರವೇರಿಸಲಾಯಿತು. ರಾಜ್ಯದ ವಿವಿಧಭಾಗಗಳು ಮತ್ತು ಆಂದ್ರಪ್ರದೇಶದಿಂದ ಭಕ್ತರು ಹಾಗೂ ಮಕ್ಕಳಭಾಗ್ಯ ಅಪೇಕ್ಷಿಸಿ ಮಡಿಲು ತುಂಬಿ ಹರಕೆ ಹೊತ್ತ ನೂರಾರು ದಂಪತಿಗಳು, ಕಂಕಣಭಾಗ್ಯ ಅಪೇಕ್ಷಿತರು, ಪಾದುಕೆಯ ಪಲ್ಲಕ್ಕಿಯೊಡನೆ 20ಕಿಮಿಗೂ ಹೆಚ್ಚು ಗಿರಿಶಿಖರಗಳ ದಾರಿಯನ್ನು ಕ್ರಮಿಸಿ ಅಷ್ಠತೀರ್ಥಗಳಲ್ಲಿ ಪವಿತ್ರಸ್ನಾನ ಮಾಡಿದರು. ಇಡೀ ದಿನವೇದಪಾರಾಯಣ ನಡೆದರೆ ರಾತ್ರಿ ಶ್ರೀಯೋಗಾನರಸಿಂಹಸ್ವಾಮಿ ಗಿರಿಪ್ರದಕ್ಷಿಣೆವೇಳೆ ವಿಷ್ಣುಸಹಸ್ರನಾಮ ಪಾರಾಯಣಮಾಡಲಾಯಿತು.
ಅಷ್ಠತೀರ್ಥೋತ್ಸವ ಪ್ರಯುಕ್ತ ದೇವಾಲಯದಲ್ಲಿ ಬೆಳಗಿನಜಾವ 5-30ಕ್ಕೆ ನಿತ್ಯಪೂಜಾಕೈಂಕರ್ಯಗಳನ್ನು ಆರಂಭಿಸಲಾಯಿತು. 8-30ಕ್ಕೆ ವೇದಾಂತದೇಶಿಕರ ಸನ್ನಿಧಿಗೆ ಪಾದುಕೆಯಪಲ್ಲಕ್ಕಿಯ ಮಂಟಪೋತ್ಸವ ನೆರವೇರಿತು. 9ಗಂಟೆಗೆ ಆಚಾರ್ಯರಾಮಾನುಜರನ್ನೊಳಗೊಂಡು ವಜ್ರಖಚಿತರಾಜಮುಡಿ ಉತ್ಸವ ಧರಿಸಿದ ಚೆಲುವನಾರಾಯಣಸ್ವಾಮಿಯ ಉತ್ಸವ ಕಲ್ಯಾಣಿಗೆ ತಲುಪಿತು. ಅಲ್ಲಿನ ಗಜೇಂದ್ರವರದನ ಸನ್ನಿಧಿಯ ಬಳಿ ಸ್ವಾಮಿಯ ಪಾದುಕೆಗೆ ಲೋಕಲ್ಯಾರ್ಥವಾಗಿ ಹಾಗೂ ಹರಕೆಹೊತ್ತಭಕ್ತರ ಇಷ್ಠಾರ್ಥನೆರವೇರಲಿ ಎಂದು ಪ್ರಾರ್ಥಿಸಿ ವಿಶೇಷ ಆರಾಧನೆಮಾಡಿ ಕಲ್ಯಾಣಿಯಲ್ಲಿ ಅಭಿಷೇಕ ಮಾಡಲಾಯಿತು. ಸಾವಿರಾರು ಭಕ್ತರು ಕಲ್ಯಾಣಿಯಲ್ಲಿ ಪವಿತ್ರಸ್ನಾನಮಾಡಿದ ನಂತರ ಅಷ್ಠತೀರ್ಥೋತ್ಸವಕ್ಕೆ ಚಾಲನೆ ನೀಡಲಾಯಿತು.
