ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಶಾನ್ಯ ರಾಜ್ಯದಲ್ಲಿ ಭಯೋತ್ಪಾದನೆ, ಎಡಪಂಥೀಯ ಉಗ್ರವಾದ ಶೇ.65 ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಪೊಲೀಸ್ ಸ್ಮರಣಾರ್ಥ ದಿನದಂದು ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಭಯೋತ್ಪಾದನೆ ವಿರುದ್ದ ಶೂನ್ಯ ಸಹಿಷ್ಣುತೆ ನೀತಿಯನ್ನು ಉಳಿಸಿಕೊಂಡು ಮೋದಿ ಸರ್ಕಾರವು ಕಠಿಣ ಕಾನೂನುಗಳನ್ನು ಮಾಡಿದೆ. ಪೊಲೀಸ್ ಪಡೆಯ ಆಧುನೀಕರಣಕ್ಕಾಗಿ ‘ಪೊಲೀಸ್ ಟೆಕ್ನಾಲಜಿ ಮಿಷನ್’ ಅನ್ನು ಸ್ಥಾಪಿಸುವ ಮೂಲಕ ಸರ್ಕಾರವು ವಿಶ್ವದ ಅತ್ಯುತ್ತಮ ಭಯೋತ್ಪಾದನಾ ನಿಗ್ರಹ ಪಡೆಯನ್ನು ಹೊಂದುವ ನಿಟ್ಟಿನಲ್ಲಿ ಕೆಲಸ ಮಾಡಿದೆ ಎಂದು ತಿಳಿಸಿದರು.
ದೇಶದ ಮೂರು ಹಾಟ್ಸ್ಪಾಟ್ಗಳಾದ ಎಲ್ಡಬ್ಲ್ಯೂಇ (ಎಡಪಂಥೀಯ ಉಗ್ರಗಾಮಿ ಪೀಡಿತ ರಾಜ್ಯಗಳು) ಈಶಾನ್ಯ, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು ಶಾಂತಿಯುತವಾಗುತ್ತಿವೆ ಎಂದು ಹೇಳಿದ್ದಾರೆ.
ಇಂದು ಮೋದಿ ಸರ್ಕಾರವು ಸಂಸತ್ತಿನಲ್ಲಿ ಮೂರು ಮಸೂದೆಗಳನ್ನು ಮಂಡಿಸಿದೆ. ಮೂರು ಶಾಸನಗಳು 150 ವರ್ಷಗಳ ಹಳೆಯ ಕಾನೂನುಗಳನ್ನು ಬದಲಿಸುತ್ತವೆ ಮತ್ತು ಪ್ರತಿಯೊಬ್ಬ ನಾಗರಿಕನಿಗೂ ಎಲ್ಲ ಸಂವಿಧಾನಾತ್ಮಕ ಹಕ್ಕುಗಳನ್ನು ಖಾತರಿಪಡಿಸುತ್ತವೆ. ಪ್ರಸ್ತಾವಿತ ಕಾನೂನುಗಳು ಭಾರತೀಯತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.
ಪೊಲೀಸ್ ಸಿಬ್ಬಂದಿಗಳ ಪ್ರಯತ್ನ ಮತ್ತು ಸಾಧನೆಗಳಿಗೆ ಧನ್ಯವಾದ. ಅವರಿಂದ ಈಶಾನ್ಯದಲ್ಲಿ ಭಯೋತ್ಪಾದನೆ, ಎಡಪಂಥೀಯ ಉಗ್ರವಾದ ಮತ್ತು ಬಂಡಾಯ ಘಟನೆಗಳಲ್ಲಿ ಶೇಕಡಾ 65ರಷ್ಟು ಕುಸಿತವಾಗಿದೆ. ಭಯೋತ್ಪಾದಕರ ವಿರುದ್ಧ ಹೋರಾಡುವುದು, ಅಪರಾಧ ತಡೆಯುವುದು, ಜನಸಂದಣಿಯ ಸಮ್ಮುಖದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಅಥವಾ ವಿಪತ್ತುಗಳ ಸಂದರ್ಭಗಳಲ್ಲಿ ಗುರಾಣಿಯಾಗಿ ಕಾರ್ಯನಿರ್ವಹಿಸುವ ಮೂಲಕ ಜನರನ್ನು ರಕ್ಷಿಸುವುದು. ಹೀಗೆ ಎಲ್ಲ ಸಂದರ್ಭಗಳಲ್ಲೂ ಪೊಲೀಸ್ ಸಿಬ್ಬಂದಿಗಳು ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ ಎಂದು ಹೇಳಿದರು.
ಈ ಹಿಂದೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮೂಲಕ ವಿವಿಧ ಪೊಲೀಸ್ ಪಡೆಗಳ ಸಿಬ್ಬಂದಿ ವಿಪತ್ತು ನಿರ್ವಹಣೆಯಲ್ಲಿ ವಿಶ್ವದಾದ್ಯಂತ ಹೆಸರು ಗಳಿಸಿದ್ದಾರೆ. ಎಷ್ಟೇ ದೊಡ್ಡ ಅನಾಹುತವಾದರೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಅಲ್ಲಿಗೆ ತಲುಪಿದಾಗ ಈಗ NDRF ಬಂದಿರುವುದರಿಂದ ಸಮಸ್ಯೆ ಇಲ್ಲ ಎಂಬ ವಿಶ್ವಾಸ ಜನರಲ್ಲಿ ಮೂಡುತ್ತದೆ ಎಂದರು.
ಸ್ವಾತಂತ್ರ್ಯದ ನಂತರ ದೇಶಕ್ಕೆ ಸೇವೆ ಸಲ್ಲಿಸಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ 36,250 ಪೊಲೀಸ್ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅವರು, ಈ ಪೊಲೀಸ್ ಸ್ಮಾರಕವು ಕೇವಲ ಸಂಕೇತವಾಗಿರದೇ ರಾಷ್ಟ್ರ ನಿರ್ಮಾಣಕ್ಕಾಗಿ ಪೊಲೀಸ್ ಸಿಬ್ಬಂದಿಯ ತ್ಯಾಗ ಮತ್ತು ಸಮರ್ಪಣೆಗೆ ಮನ್ನಣೆಯಾಗಿದೆ ಎಂದರು.