ಹೊಸದಿಗಂತ ವರದಿ ಚಿಕ್ಕಮಗಳೂರು:
ತಾಲೂಕಿನ ಕಣತಿ ಗ್ರಾಮದ ಚಿಕ್ಕಮಗಳೂರು-ಶೃಂಗೇರಿ ರಾಷ್ತ್ರೀಯ ಹೆದ್ದಾರಿ ಸಮೀಪದ ಕಾಫಿತೋಟದಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಮರಿಯೊಂದಿಗೆ ರಸ್ತೆ ದಾಟುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಗುಂಪಿನಲ್ಲಿ 7 ಕಾಡಾನೆಗಳು ಇದ್ದು, ಕಳೆದೊಂದು ತಿಂಗಳಿಂದ ಈ ಭಾಗದಲ್ಲಿ ಇವುಗಳ ಉಪಟಳ ಹೆಚ್ಚಾಗಿದೆ. ಅಡಿಕೆ, ಕಾಫಿ, ಭತ್ತದ ಗದ್ದೆಗಳಿಗೆ ದಾಳಿ ಇಟ್ಟು ಬೆಳೆ ನಾಶಪಡಿಸುತ್ತಿದ್ದು, ಆನೆಗಳ ಉಪಟಳದಿಂದ ಸ್ಥಳೀಯ ರೈತರು ಬೇಸತ್ತಿದ್ದಾರೆ. ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಮುಂದಾಗಬೇಕೆಂದು ಜನರು ಆಗ್ರಹಿಸಿದ್ದಾರೆ.
ಈಗಾಗಲೇ ಮಳೆ ಕೊರತೆಯಿಂದ ಕಂಗಲಾಗಿರುವ ರೈತರು ಮತ್ತು ಬೆಳೆಗಾರರ ಪಾಲಿಗೆ ಕಾಡಾನೆಗಳ ಹಾವಳಿ ಗಾಯದಮೇಲೆ ಬರೆ ಎಳೆದಂತಾಗಿದೆ.