ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಪರಿಚಿತ ವ್ಯಕ್ತಿಯೊಬ್ಬ ಗೃಹಲಕ್ಷ್ಮೀ ಯೋಜನೆ ನೋಂದಣಿ ಮಾಡುವುದಾಗಿ ನಂಬಿಸಿ ಅಂಚೆ ಕಚೇರಿಗೆ ಕರೆದೊಯ್ದು ವೃದ್ಧೆಯ ಬಳಿ ಇದ್ದ 40 ಗ್ರಾಂ ಚಿನ್ನದ ಸರ ಕಳ್ಳತನ ಮಾಡಿದ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹಾರೋಕೊಪ್ಪ ಗ್ರಾಮದಲ್ಲಿ ನಡೆದಿದೆ.
ಹಾರೋಕೊಪ್ಪದ ಸಾವಿತ್ರಮ್ಮ (62) ಎಂಬವರು ಮಂಡ್ಯದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪುತ್ರನನ್ನು ನೋಡಲೆಂದು ಹೋಗಿದ್ದರು. ವಾಪಸ್ ಮಂಡ್ಯದಿಂದ ಚನ್ನಪಟ್ಟಣ ಬಸ್ ನಿಲ್ದಾಣಕ್ಕೆ ಬಂದಿಳಿದಾಗ ಅಪರಿಚಿತ ವ್ಯಕ್ತಿಯೊಬ್ಬ ಪರಿಚಿತನಂತೆ ನಟಿಸಿ ಸಾವಿತ್ರಮ್ಮ ಜೊತೆ ಮಾತನಾಡಿದ್ದಾನೆ. ಅಲ್ಲದೆ, ಗೃಹಲಕ್ಷ್ಮೀ ಯೋಜನೆ ಹಣ ಬರುವಂತೆ ಮಾಡಿಸುತ್ತೇನೆ ಎಂದು ನಂಬಿಸಿದ್ದಾನೆ.
ವ್ಯಕ್ತಿಯ ಮಾತು ನಂಬಿದ ಸಾವಿತ್ರಮ್ಮ ಅರ್ಜಿ ಹಾಕಲು ಒಪ್ಪಿಕೊಂಡಿದ್ದಾರೆ. ಅದರಂತೆ, ಅಪರಿಚಿತ ವ್ಯಕ್ತಿ ಅರ್ಜಿಗೆ ವೈದ್ಯರು ಸಹಿ ಮಾಡಬೇಕೆಂದು ವೃದ್ಧೆಯನ್ನು ಆಸ್ಪತ್ರೆಗೆ ಬಳಿಗೆ ಕರೆದೊಯ್ದಿದ್ದಾನೆ. ಅಲ್ಲಿ ಆತ ನಿಮ್ಮ ಸರ ನೋಡಿದರೆ ವೈದ್ಯರು ಸಹಿ ಹಾಕಲ್ಲ ತೆಗೆಯಿರಿ ಎಂದಿದ್ದಾನೆ. ಹೀಗಾಗಿ ಸಾವಿತ್ರಮ್ಮ ತನ್ನಲ್ಲಿದ್ದ ಚಿನ್ನದ ಸರ, ಹಣವನ್ನು ಪರ್ಸ್ನಲ್ಲಿ ಹಾಕಿದ್ದಾರೆ. ಈ ವೇಳೆ ಸಾವಿತ್ರಮ್ಮಗೆ ಗೊತ್ತಾಗದಂತೆ ಪರ್ಸ್ನಿಂದ ಚಿನ್ನದ ಸರ ಎಗರಿಸಿದ್ದಾನೆ.
ಚಿನ್ನದ ಸರ ಕಳವು ಮಾಡಿದ ನಂತರ ಸಾವಿತ್ರಮ್ಮರನ್ನು ಅಂಚೆ ಕಚೇರಿ ಬಳಿಗೆ ಕರೆತಂದು ಕೂರಿಸಿ ಹೋಗಿದ್ದಾನೆ. ಎಷ್ಟೇ ಹೊತ್ತು ಕಾದರೂ ಆ ವ್ಯಕ್ತಿ ವಾಪಸ್ ಬಾರದ್ದನ್ನು ಅನುಮಾನಿಸಿದ ಸಾವಿತ್ರಮ್ಮ, ಪರ್ಸ್ ತೆಗೆದು ನೋಡಿದಾಗ ಸರ ಕಳ್ಳತನ ಆಗಿರುವುದು ತಿಳಿದುಬಂದಿದೆ. ಈ ಬಗ್ಗೆ ಸಾವಿತ್ರಮ್ಮ ಅವರು ಚನ್ನಪಟ್ಟಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
