ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತವು ಕೃಷಿ ಪ್ರಧಾನ ದೇಶ. ಇಂದಿಗೂ ದೇಶದ 60 ಶೇಕಡಾದಷ್ಟು ಜನಸಂಖ್ಯೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿದೆ. ಭಾರತದ ಜಿಡಿಪಿಯ 18 ಶೇಕಡಾದಷ್ಟು ಪಾಲು ಕೃಷಿಯಿಂದಲೇ ಬರುತ್ತದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ನಮ್ಮಪಾರಂಪರಿಕ ಕೃಷಿ ವಿಧಾನವನ್ನು ಆಧುನಿಕ ಕೃಷಿವಿಧಾನದೊಂದಿಗೆ ಸಮ್ಮಿಳಿತಗೊಳಿಸಿ ಪ್ರತೀ ಹೆಕ್ಟೇರ್ ಭತ್ತದ ಇಳುವರಿಯನ್ನು ಹೆಚ್ಚಳವಾಗಿಸಿದ ಬಗೆಯ ಕುರಿತೂ ನೀವು ತಿಳಿದುಕೊಳ್ಳಬೇಕು.
1964-65ರ ಹೊತ್ತಿಗೆ ಪ್ರತೀಹೆಕ್ಟೇರ್ ಗೆ 1,078 ಕೆಜಿಯಷ್ಟು ಭತ್ತವನ್ನು ಉತ್ಪಾದಿಸಲಾಗುತ್ತಿತ್ತು. ನಂತರದಲ್ಲಿ ಈ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರವು ಅನೇಕ ಕ್ರಮ ಕೈಗೊಂಡಿತು. 1960 ದಶಕದಲ್ಲಿನ ಹಸಿರು ಕ್ರಾಂತಿಯು ಈ ಉತ್ಪಾದನೆಯನ್ನು ಹೆಚ್ಚಿಸಿತು. ರಸಗೊಬ್ಬರಗಳ ಪೂರೈಕೆ, ನೀರಾವರಿ ವ್ಯವಸ್ಥೆಯಲ್ಲಿ ಸುಧಾರಣೆ, ಸುಧಾರಿತ ಬೀಜಗಳ ವಿತರಣೆ, ಕಳೆನಾಶಕ. ಕೀಟ ನಾಶಕ. ರೋಗ ಬಾಧೆಗೆ ವೈಜ್ಞಾನಿಕ ಪರಿಹಾರ ಇತ್ಯಾದಿ ಕ್ರಮಗಳು ಇಳುವರಿ ಹೆಚ್ಚಲು ಕಾರಣವಾದವು. 1960ರಿಂದೀಚೆಗೆ ಪ್ರತಿ ಹೆಕ್ಟೇರ್ ಇಳುವರಿಯಲ್ಲಿ 3 ಪಟ್ಟು ಹೆಚ್ಚಳವಾಗಿದೆ. 2020-21ರಲ್ಲಿ ಪ್ರತಿ ಹೆಕ್ಟೇರ್ ಇಳುವರಿಯು 2,713 ಕೇಜಿಯಷ್ಟು ದಾಖಲಾಗಿದೆ. ಹೆಚ್ಚಿದ ಉತ್ಪಾದಕತೆಯು ಭಾರತವನ್ನು ಪ್ರಮುಖ ಅಕ್ಕಿ ರಫ್ತುದಾರನನ್ನಾಗಿ ಮಾಡಿದೆ. 2021-22ರಲ್ಲಿ 150 ದೇಶಗಳಿಗೆ ಅಕ್ಕಿಯನ್ನು ರಫ್ತು ಮಾಡಲಾಗಿದೆ.

