ಹೊಸದಿಗಂತ ವರದಿ ಮಡಿಕೇರಿ:
ಕೊಡವ ಹಾಕಿ ಹಬ್ಬದ ಜನಕ ಪಾಂಡಂಡ ಕುಟ್ಟಪ್ಪ (ಕುಟ್ಟಣಿ ) ಅವರ ಸ್ಮರಣಾರ್ಥ ಕೊಡವ ಹಾಕಿ ಅಕಾಡೆಮಿ ವತಿಯಿಂದ ಅ.27 ರಿಂದ ನ.6 ರವರೆಗೆ ಕೊಡವ ಕುಟುಂಬ ತಂಡಗಳ ನಡುವೆ 5- O ಸೈಡ್ ಹಾಕಿ ನಮ್ಮೆ ನಡೆಯಲಿದೆ.
ಅ.27 ರಂದು ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಬೆಳಗ್ಗೆ 10.30 ಗಂಟೆಗೆ ನಡೆಯುವ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಚಿರ ಎ.ಅಯ್ಯಪ್ಪ ಅತಿಥಿಗಳಾಗಿ ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಭಾರತೀಯ ಹಾಕಿ ಆಟಗಾರ ಹಾಗೂ ಒಲಂಪಿಯನ್ ಚೆಪ್ಪುಡಿರ ಎಸ್.ಪೂಣಚ್ಚ, ರಾಜ್ಯ ಸರ್ಕಾರದ ಮುಖ್ಯ ವಿದ್ಯುತ್ ನಿರೀಕ್ಷಕ ತೀತಿರ ಎನ್.ಅಪ್ಪಚ್ಚು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎ.ಗುರುಸ್ವಾಮಿ, ಕೂರ್ಗ್ ಹಾಕಿ ಅಸೋಸಿಯೇಷನ್’ನ ಮಾಜಿ ಅಧ್ಯಕ್ಷರಾದ ಚೆಪ್ಪುಡಿರ ಎ.ಮುತ್ತಣ್ಣ, ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಪೊನ್ನಂಪೇಟೆ ಗ್ರಾ.ಪಂ ಅಧ್ಯಕ್ಷೆ ಗಿರಿಜಾ ವೆಂಕಟೇಶ್, ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಾಧ್ಯಕ್ಷ ಮಂದಚ್ಚಂಡ ಚೆಟ್ಟಿಯಪ್ಪ, ಪ್ರಾಂಶುಪಾಲ ಆರ್.ರಮೇಶ್, ಹಾಕಿ ಮೈಸೂರು ಅಧ್ಯಕ್ಷ ಕೊಂಗಂಡ ದಿಲೀಪ್ ಹಾಗೂ ಹಾಕಿ ಕೂರ್ಗ್ ಉಪಾಧ್ಯಕ್ಷ ಪಳಂಗಂಡ ಲವಕುಮಾರ್ ಪಾಲ್ಗೊಳ್ಳಲಿದ್ದಾರೆ.
ನ.6 ರಂದು ಅಂತಿಮ ಪಂದ್ಯ: ನ.6 ರಂದು ಬೆಳಗ್ಗೆ ಎರಡು ಸೆಮಿಫೈನಲ್ ಪಂದ್ಯಾವಳಿಗಳು ಮತ್ತು ಮಧ್ಯಾಹ್ನ 3.30 ಗಂಟೆಗೆ ಫೈನಲ್ ಪಂದ್ಯಾವಳಿ ಹಾಗೂ ಬಹುಮಾನ ವಿತರಣಾ ಸಮಾರಂಭ ಜರುಗಲಿದೆ.
ಮೊದಲನೇ ಬಹುಮಾನ ಒಂದು ಲಕ್ಷ ರೂಪಾಯಿಯನ್ನು ಪಾಂಡಂಡ ಕುಟ್ಟಪ್ಪ ಅವರ ಪತ್ನಿ ಲೀಲಾ ಕುಟ್ಟಪ್ಪ ಅವರು ನೀಡುತ್ತಿದ್ದು, 2ನೇ ಬಹುಮಾನ 50 ಸಾವಿರ ರೂ., ಸೆಮಿಫೈನಲ್’ನಲ್ಲಿ ಸೋತ ಎರಡು ತಂಡಗಳಿಗೆ ತಲಾ 15 ಸಾವಿರ ರೂ. ಮತ್ತು ಕ್ವಾರ್ಟರ್ ಫೈನಲ್ಸ್’ನಲ್ಲಿ ಸೋತ ನಾಲ್ಕು ತಂಡಗಳಿಗೆ ತಲಾ 5 ಸಾವಿರ ರೂ.ಗಳನ್ನು ನೀಡಲಾಗುವುದು ಎಂದು ಕೊಡವ ಹಾಕಿ ಅಕಾಡೆಮಿ ತಿಳಿಸಿದೆ.
