ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತಿಮ ವರ್ಷದ ಇಂಜಿನಿಯರಿಂಗ್ ಸಮಯದಲ್ಲಿ ಸಂದರ್ಶನದ ಮೂಲಕ ಆಯ್ಕೆಗೊಂಡು ಉದ್ಯೋಗದ ಆಫರ್ ಲೆಟರ್ ಗಳನ್ನು ಸಹ ಪಡೆದಿದ್ದ ವರಿಗೆ ಇದೀಗ ಬಿಗ್ ಶಾಕ್ ಸುದ್ದಿ ಎದುರಾಗಿದೆ.
ಹೆಸರಾಂತ ಐಟಿ ಕಂಪಗಳಾದ ವಿಪ್ರೋ, ಇನ್ಫೋಸಿಸ್, ಟೆಕ್ ಮಹೀಂದ್ರಾ ಮೊದಲಾದ ಕಂಪನಿಗಳು ಆಯ್ಕೆಯಾದ ನೂರಾರು ಮಂದಿಗೆ ಉದ್ಯೋಗ ರದ್ದುಗೊಳಿಸಿರುವ ಮಾಹಿತಿಯನ್ನು ನೀಡಿವೆ ಎಂದು ತಿಳಿದು ಬಂದಿದೆ.
ತಮಗೆ ಹೆಸರಾಂತ ಐಟಿ ಕಂಪನಿಗಳಿಗೆ ಆಯ್ಕೆಯಾದ ಸಂತಸದಲ್ಲಿದ್ದ ಫ್ರೆಶರ್ಸ್ ಗಳು ಇದೀಗ ಉದ್ಯೋಗ ನಿರಾಕರಣೆಯ ಮಾಹಿತಿ ಸಿಗುತ್ತಿದ್ದಂತೆ ಕಂಗಾಲಾಗಿದ್ದಾರೆ. ಅಲ್ಲದೆ ತಮಗೆ ಈ ಕಂಪನಿಗಳಲ್ಲಿ ಉದ್ಯೋಗ ಸಿಕ್ಕ ಕಾರಣ ಇತರೆ ಕಂಪನಿಗಳಿಗೂ ಸಹ ಉದ್ಯೋಗ ಕೋರಿ ಅರ್ಜಿ ಸಲ್ಲಿಸಿರಲಿಲ್ಲ. ಇದಿರಂದ ಅತಂತ್ರರಾಗಿದ್ದಾರೆ.
ಉದ್ಯೋಗ ನಿರಾಕರಣೆ ಇ-ಮೇಲ್ ಕಳಿಸುವ ವೇಳೆ ನಿಮ್ಮ ಶೈಕ್ಷಣಿಕ ಅರ್ಹತೆ ನಾವು ನಿಗದಿಪಡಿಸಿದ ಮಟ್ಟದಲ್ಲಿಲ್ಲ ಎಂದು ತಿಳಿಸಲಾಗಿದೆ ಎನ್ನಲಾಗಿದ್ದು, ಹಾಗಾದರೆ ಸಂದರ್ಶನದ ಬಳಿಕ ಆಫರ್ ಲೆಟರ್ ಕೊಟ್ಟಿದ್ದು ಯಾಕೆ ಎಂಬ ಪ್ರಶ್ನೆ ಈಗ ಮೂಡಿದೆ.
ಬಹುತೇಕ ಫ್ರೆಶರ್ಸ್ ಗಳಿಗೆ ಏಳೆಂಟು ತಿಂಗಳ ಹಿಂದೆಯೇ ಆಫರ್ ಲೆಟರ್ ಸಿಕ್ಕಿದೆ ಎನ್ನಲಾಗಿದ್ದು, ಇದೀಗ ಇಂಜಿನಿಯರಿಂಗ್
ಅಂತಿಮ ವರ್ಷದ ಫಲಿತಾಂಶವೂ ಹೊರ ಬಿದ್ದಿದೆ. ಹೀಗಾಗಿ ಇನ್ನೇನು ಕೆಲ ದಿನಗಳಲ್ಲೇ ಉದ್ಯೋಗಕ್ಕೆ ಹೋಗಬಹುದೆಂಬ ಕನಸು ಕಂಡಿದ್ದ ಅವರಿಗೆ ನಿರಾಕರಣೆ ಇ-ಮೇಲ್ ನಿರಾಸೆಮೂಡಿಸಿದೆ.
ಮೂಲಗಳ ಪ್ರಕಾರ ಜಾಗತಿಕ ಮಟ್ಟದಲ್ಲಿ ಐಟಿ ವಲಯದ ಬೆಳವಣಿಗೆ ನಿಧಾನಗತಿಯಲ್ಲಿ ಸಾಗುತ್ತಿರುವುದು, ಜೊತೆಗೆ ವಿಶ್ವ ಮತ್ತೊಮ್ಮೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಹುದೆಂಬ ಕಾರಣಕ್ಕೆ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಐಟಿ ಕಂಪನಿಗಳು ಹಿಂದೇಟು ಹಾಕುತ್ತಿವೆ ಎನ್ನಲಾಗಿದೆ.
