ಹೊಸದಿಗಂತ ಡಿಜಿಟಲ್ ಡೆಸ್ಕ್ 
ʼಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿಯನ್ನು ಕಳೆದುಕೊಂಡಿದ್ದೇವೆ. ಈಗ ಮತ್ತೊಂದು ಮಸೀದಿಯನ್ನು ಕಳೆದುಕೊಳ್ಳಲು ನಾವು ಬಯಸುವುದಿಲ್ಲʼ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಾರಾಣಸಿ ಕೋರ್ಟ್ ಜ್ಞಾನವಾಪಿ ಮಸೀದಿ ಮರು ಸಮೀಕ್ಷೆ ನಡೆಸುವಂತೆ ನೀಡಿರುವ ತೀರ್ಪಿಗೆ ಪ್ರತಿಕ್ರಿಯಿಸಿದ್ದಾರೆ.
ವಾರಾಣಸಿ ಕೋರ್ಟ್ ತೀರ್ಪನ್ನು ಪೂಜಾ ಸ್ಥಳಗಳ ಕಾಯಿದೆ 1991 ರ ಘೋರ ಉಲ್ಲಂಘನೆ ಎಂದು ಕರೆದ ಓವೈಸಿ, ಬಾಬರಿ ಮಸೀದಿ ವಿವಾದದ ವಿಚಾರವಾಗಿ ಸುಪ್ರೀಂ ನೀಡಿದ್ದ ತೀರ್ಪಿನ ಸ್ಪಷ್ಟ ಉಲ್ಲಂಘನೆಯಿದು ಎಂದು ಹೇಳಿದ್ದಾರೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಮಸೀದಿ ಸಮಿತಿಯು ಸುಪ್ರೀಂ ಕೋರ್ಟ್ಗೆ ಹೋಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದರು.
1991 ರ ಆರಾಧನಾ ಸ್ಥಳಗಳ ಕಾಯಿದೆಯ ಪ್ರಕಾರ, ಯಾವುದೇ ಧಾರ್ಮಿಕ ಪಂಗಡದ ಪೂಜಾ ಸ್ಥಳವನ್ನು ಅಥವಾ ಬೇರೆ ಯಾವುದೇ ಧಾರ್ಮಿಕ ಪಂಗಡದ ಆರಾಧನೆಯ ಸ್ಥಳವಾಗಿ ಪರಿವರ್ತಿಸಬಾರದು ಎಂದಿದೆ. ಆಗಸ್ಟ್ 15, 1947 ರಂದು ಇದ್ದ ಧಾರ್ಮಿಕ ಸ್ಥಳಗಳ ಸ್ವರೂಪವನ್ನು ಬದಲಾಯಿಸಲು ಪ್ರಯತ್ನಿಸುವುದು ಅಪರಾಧವೆಂದು ಕಾಯಿದೆ ಸ್ಪಷ್ಟವಾಗಿ ಹೇಳುತ್ತದೆ. ಧಾರ್ಮಿಕ ಸ್ಥಳಗಳ ಸ್ವರೂಪವನ್ನು ಬದಲಾಯಿಸಲು ಪ್ರಯತ್ನಿಸುವವರ ವಿರುದ್ಧ ಯೋಗಿ ಸರ್ಕಾರ ತಕ್ಷಣವೇ ಎಫ್ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ವಾರಾಣಸಿ ನ್ಯಾಯಾಲಯವು ಈ ವಿಷಯದ ವಿಚಾರಣೆಯ ವೇಳೆ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಗ್ಯಾನವಾಪಿ ಮಸೀದಿಯನ್ನು ಮರು ಸಮೀಕ್ಷೆ ನಡೆಸಿ ಮೇ 17 ರೊಳಗೆ ವರದಿಯನ್ನು ಸಲ್ಲಿಸಬೇಕು ಎಂದು ಹೇಳಿದ ವಿಚಾರವಾಗಿ ಓವೈಸಿಯಿಂದ ಈ ಪ್ರತಿಕ್ರಿಯೆ ಬಂದಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ
