ಹೊಸದಿಗಂತ ಡಿಜಿಟಲ್ ಡೆಸ್ಕ್:
ವರಂಗಲ್ ಜಿಲ್ಲೆಯಲ್ಲಿರುವ ಸರ್ಕಾರಿ ಜವಳಿ ಗೋದಾಮಿನಲ್ಲಿ ಭಾರೀ ಅವಘಡ ಸಂಭವಿಸಿದೆ. ವರಂಗಲ್ನ ಧರ್ಮಾರಂ ಗ್ರಾಮದ ಬಳಿಯಿರುವ ಟೆಸ್ಕೋ ಗೋಡೌನ್ಗೆ ಬೆಂಕಿ ಬಿದ್ದು ಬರೋಬ್ಬರಿ 40ಕೋಟಿಗೂ ಹೆಚ್ಚು ಆಸ್ತಿ-ಪಾಸ್ತಿ ನಷ್ಟವಾಗಿದೆ ಎನ್ನಲಾಗುತ್ತಿದೆ. ಆದರೆ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಉಂಟಾಗದಿರುವುದರಿಂದ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ವಾಹನ ದೌಡಾಯಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ರು. ತಡರಾತ್ರಿಯಿಂದ ಬೆಂಕಿಯನ್ನು ಹತೋಟಿಗೆ ತರಲು ಸತತ ಪ್ರಯತ್ನ ನಡೆಸುತ್ತಿದ್ದಾರೆ. ಬೆಂಕಿಯ ಕೆನ್ನಾಲಿಗೆ ವ್ಯಾಪಕವಾಗಿ ಹರಡಿರುವುದರಿಂದ ಹತೋಟಿಗೆ ತರುವುದು ತುಸು ಕಷ್ಟವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿಯ ತಾಪಮಾನಕ್ಕೆ ಗೋದಾಮಿನ ಗೋಡೆಗಳು ಕುಸಿದು ಬಿದ್ದಿವೆ.
ವಿದ್ಯಾರ್ಥಿಗಳಿಗೆ ನೀಡುವ ಕೈಮಗ್ಗದ ಸಮವಸ್ತ್ರ ಶೇಖರಣೆಯ ಗೋದಾಮು ಇದಾಗಿದ್ದು, ಕರೋನಾ ಕಾರಣದಿಂದಾಗಿ ಸಮವಸ್ತ್ರ ಹಂಚಿಕೆ ನಡೆದಿಲ್ಲ. ಹಾಗಾಗಿ ವಸ್ತ್ರಗಳು ಗೋದಾಮಿನಲ್ಲಿಯೇ ಉಳಿದಿವೆ. ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬಟ್ಟೆಯ ಗೋದಾಮು ಆದ್ದರಿಂದ ಕೆಲವೇ ಕ್ಷಣಗಳಲ್ಲಿ ಜ್ವಾಲೆ ವ್ಯಾಪಕವಾಗಿ ಹರಡಿಕೊಂಡಿದೆ. ಘಟನಾ ಸ್ಥಳಕ್ಕೆ ಉಗ್ರಾಣ ಉಸ್ತುವಾರಿ ಶ್ರೀನಿವಾಸ್ ಮತ್ತು ಡಿಎಂಒ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ. ಅಗ್ನಿಅವಘಡಕ್ಕೆ ಪ್ರಮುಖ ಕಾರಣ ಏನು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ.

