ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಪರ್ಜಾಯ್ ಚಂಡಮಾರುತದ ಪ್ರಭಾವದಿಂದಾಗಿ ಗುಜರಾತ್ ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 95 ರೈಲುಗಳನ್ನು ರದ್ದುಗೊಳಿಸಲಾಗಿದೆ. ಜೂನ್ 15 ರಂದು ಗುಜರಾತ್ನ ಸೌರಾಷ್ಟ್ರ ಮತ್ತು ಕಚ್ ಪ್ರದೇಶಗಳ ಮೇಲೆ ಬಿಪರ್ಜಾಯ್ ಚಂಡಮಾರುತವು ತೀವ್ರವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಘೋಷಿಸಿದ ನಂತರ ಗುಜರಾತ್ ರಾಜ್ಯದಲ್ಲಿ 95 ರೈಲುಗಳನ್ನು ರದ್ದುಗೊಳಿಸುವುದಾಗಿ ಭಾರತೀಯ ರೈಲ್ವೆ ಬುಧವಾರ ತಿಳಿಸಿದೆ.
ಬಿಪರ್ಜೋಯ್ ಚಂಡಮಾರುತದ ಹಿನ್ನೆಲೆಯಲ್ಲಿ ವಿಪತ್ತು ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ ಎಂದು ಪಶ್ಚಿಮ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಶೋಕ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ. ಭುಜ್, ಗಾಂಧಿದಾಮ್, ಪೋರಬಂದರ್ ಮತ್ತು ಓಖಾ ಪ್ರದೇಶಗಳಲ್ಲಿ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು ಎಡಿಆರ್ಎಂಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ರೈಲ್ವೆ ಜನರಲ್ ಮ್ಯಾನೇಜರ್ ಹೇಳಿದ್ದಾರೆ.
ಚಂಡಮಾರುತದಿಂದಾಗಿ ಗಾಳಿಯ ವೇಗ ಹೆಚ್ಚಿರುವ ಕಾರಣ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ವಿವರಿಸಿದ್ದಾರೆ. ಚಂಡಮಾರುತದ ತುರ್ತು ಪರಿಸ್ಥಿತಿಯನ್ನು ಎದುರಿಸಲು ರೈಲ್ವೆ ಯಂತ್ರೋಪಕರಣಗಳನ್ನು ಸಿದ್ಧಪಡಿಸಲಾಗಿದೆ. ಭಾವನಗರ, ರಾಜ್ಕೋಟ್, ಅಹಮದಾಬಾದ್, ಗಾಂಧಿಧಾಮದಲ್ಲಿ ತುರ್ತು ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದ್ದು, ಹೆಚ್ಚುವರಿ ಸಹಾಯವಾಣಿ ಸಂಖ್ಯೆಗಳನ್ನು ಸಹ ಸಕ್ರಿಯಗೊಳಿಸಲಾಗಿದೆ ಎಂದು ಶಿವಾಜಿ ಹೇಳಿದರು.ರೈಲು ಎಲ್ಲಿಯಾದರೂ ನಿಲ್ಲಿಸಿದರೆ ಪ್ರಯಾಣಿಕರನ್ನು ಅವರ ಸ್ಥಳಗಳಿಗೆ ಕರೆದೊಯ್ಯಲು ಸಿದ್ಧರಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.