ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್‌ನ ಮೊರ್ಬಿಯಲ್ಲಿ ಭಾನುವಾರ ತೂಗು ಸೇತುವೆ ಕುಸಿದ ಘಟನೆಯಲ್ಲಿ ರಾಜ್‌ಕೋಟ್‌ನ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಮೋಹನ್‌ಭಾಯ್ ಕುಂದರಿಯಾ ಅವರ ಹನ್ನೆರಡು ಕುಟುಂಬ ಸದಸ್ಯರು ಸಾವನ್ನಪ್ಪಿದ್ದಾರೆ. ಮೊರ್ಬಿ ಸೇತುವೆ ಕುಸಿತದ ಘಟನೆಯಲ್ಲಿ ಕುಂದರಿಯಾ ಅವರ ಸಹೋದರಿಯ ಕುಟುಂಬದ 12 ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ಸಂಸದರ ಆಪ್ತ ಸಹಾಯಕ ಎಎನ್‌ಐ ಮಾಧ್ಯಮಕ್ಕೆ ತಿಳಿಸಿದ್ದು, ಸಾವನ್ನಪ್ಪಿದವರಲ್ಲಿ ಐವರು ಮಕ್ಕಳಿದ್ದರು.
ಅಪಘಾತದ ನಂತರ ಕುಂದರಿಯಾ ಮೊರ್ಬಿ ಸ್ಥಳಕ್ಕೆ ಸ್ವತಃ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಸೇತುವೆಯು ಓವರ್‌ಲೋಡ್‌ನಿಂದಾಗಿ ಘಟನೆ ಸಂಭವಿಸಿದೆ. ಇದು ತುಂಬಾ ದುಃಖಕರವಾದ ಸಂಗತಿ. ಅನೇಕ ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ ಎಂದರು.
ಮೊರ್ಬಿ ನೇತಾಡುವ ಸೇತುವೆ ಕುಸಿತದ ಘಟನೆಯಲ್ಲಿ ಸಾವಿನ ಸಂಖ್ಯೆ 137ಕ್ಕೆ ಏರಿದೆ ಎಂದು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಸೋಮವಾರ ಹೇಳಿದ್ದಾರೆ. ತೂಗುಸೇತುವೆ ಕುಸಿದ ಘಟನೆಯ ಕುರಿತು ತನಿಖೆ ನಡೆಸಲು ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗಿದೆ ಎಂದು ಗುಜರಾತ್ ಸರ್ಕಾರ ಪ್ರಕಟಿಸಿದೆ.